ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತವನ್ನು ಕರ್ನಾಟಕ ಸರ್ಕಾರದ ಒಂದು ಸಂಪೂರ್ಣ ಸ್ವಾಮ್ಯ ಹೊಂದಿರುವ ನಿಗಮವನ್ನಾಗಿ 2013 ರ ಕಂಪನಿ ಕಾಯ್ದೆ ಅನ್ವಯ ವಿಶೇಷ ಉದ್ದೇಶವುಳ್ಳ ವಾಹನವನ್ನಾಗಿ ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು, ದಾವಣಗೆರೆ, ಹಾಸನ, ರಾಮನಗರ, ಬೆಂಗಳೂರು ಗ್ರಾಮಾಂತರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಬರಪೀಡಿತ ಪ್ರದೇಶಗಳ ಕುಡಿಯುವ ನೀರಿನ ಮತ್ತು ನೀರಾವರಿ ಬೇಡಿಕೆಯನ್ನು ನೀಗಿಸುವ ಸಲುವಾಗಿ ಸ್ಥಾಪಿಸಲಾಗಿದೆ.
ಸರ್ಕಾರವು ಮೇಲಿನ ಜಿಲ್ಲೆಗಳಡಿ ಬರುವ ಈ ಕೆಳಕಂಡ ಯೊಜನೆಗಳನ್ನು ಶೀಘ್ರ ಅನುಷ್ಠಾನಕ್ಕಾಗಿ ಹಸ್ತಾಂತರಿಸಿರುತ್ತದೆ.
- ಭದ್ರಾ ಮೇಲ್ದಂಡೆ ಯೋಜನೆ
- ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ
- ವಾಣಿ ವಿಲಾಸ ಸಾಗರ ಯೋಜನೆ
- ಗಾಯತ್ರಿ ಯೋಜನೆ
ಇದಲ್ಲದೇ, ಅತಿ ಕಡಿಮೆ ಮಳೆ ಹಾಗು ಕುಗ್ಗುತ್ತಿರುವ ಅಂತರ್ಜಲ ಮಟ್ಟದಿಂದ ಸತತವಾಗಿ ನಿರಂತರ ಬರವನ್ನು ಎದುರಿಸುತ್ತಿರುವ ಹಾಗೂ ನೀರಾವರಿಗೆ ಯಾವುದೇ ಶಾಶ್ವತ ನೀರಿನ ಮೂಲ ಇಲ್ಲದಿರುವ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಬೇರೆ ಬೇರೆ ಮೂಲಗಳಿಂದ ದೊರಕಬಹುದಾದ ಪರ್ಯಾಯ ನೀರಿನ ಲಭ್ಯತೆಗಳ ಬಗ್ಗೆ ಅಧ್ಯಯನ ನಡೆಸಿ, ಒಂದು ಶಾಶ್ವತ ನೀರಾವರಿ ಯೋಜನೆ ಕಲ್ಪಿಸುವ ಬಗ್ಗೆ ವರದಿ ಸಲ್ಲಿಸಲು ಸರ್ಕಾರವು ಒಂದು ತಜ್ಞರ ಸಮಿತಿಯನ್ನು ರಚಿಸಿರುತ್ತದೆ. ತಜ್ಞರ ಸಮಿತಿಯು ಶಿಫಾರಸ್ಸು ಮಾಡಿರುವ ಯೋಜನೆಗಳನ್ನು ಸರ್ಕಾರವು ಅನುಮೋದಿಸಿ ವಹಿಸಿದ್ದಲ್ಲಿ ವಿಶ್ವೇಶ್ವರಯ್ಯ ಜಲ ನಿಗಮದಿಂದ ಈ ಯೋಜನೆಗಳನ್ನು ಸಹಾ ಅನುಷ್ಠಾನಗೊಳಿಸಲಾಗುವುದು.